ದುರ್ಘಟನೆಯ ಕಹಿನೆನಪು ದುಃಸ್ವಪ್ನವಾಗಿ ಕಾಡಿದಾಗ...



ನಮ್ಮ ಮನಸ್ಸಿಗೆ  ಒಂದು ವಿಶೇಷ ಗುಣವಿದೆ, ಅದೇನೆಂದರೆ, ಬೇಡವಾದ ನೆನಪುಗಳನ್ನು ಸ್ತುಪ್ತ ಮನಸ್ಸೆಂಬ ಚಾಪೆಯ ಕೆಳಗೆ ಗುಡಿಸಿಬಿಡುವದು . ಈ ವಿಶೇಷ ಗುಣದ ಕೃಪೆಯಿಂದ ಅನೇಕ ಕಹಿನೆನಪುಗಳು  ದಿನಕಳೆದಂತೆ ಜಾಗ್ರತ ಮನಸ್ಸಿನಿಂದ ಮರೆಯಾಗಿ ನಾವವನ್ನು "ಮರೆತು ಬಿಡುತ್ತೇವೆ". ಆದರೆ ಕೆಲವೊಂದು ಕರಾಳ ಘಟನೆಗಳು ಕೆಲವೊಮ್ಮೆ ನಮ್ಮ ಸ್ಮೃತಿಪಟಲದಲ್ಲಿ ಅಚ್ಚೊತ್ತಿದ  ಹಾಗೆ ಕುಳಿತು ನಮ್ಮ ಮನಶಾಂತಿಯನ್ನ ಕದಡಿಬಿಡುತ್ತವೆ. ಅಂತಹ ಒಂದು ಮಾನಸಿಕ ಅನಾರೋಗ್ಯಕ್ಕೆ ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸ್ಆರ್ಡರ್ (Post Traumatic Stress Disorder , PTSD )  ಎಂದು ಹೆಸರು. 

                                                                                      ******

ಡಿಸೆಂಬರ್ ೨೬, ೨೦೦೪. ರವಿ ತನ್ನ ಪ್ರೀತಿಯ ಮಡದಿ  ಮತ್ತು ಮುದ್ದು ಮಗಳೊಂದಿಗೆ ಚೆನ್ನೈ ನ ಮರೀನಾ ಬೀಚ್ ನಲ್ಲಿ ವಿಹರಿಸುತ್ತಿದ್ದ. ಆಗ ಅಚಾನಕ್ಕಾಗಿ ಅಪ್ಪಳಿಸಿದ ಸುನಾಮಿ ಅಲೆಗಳು  ಅವನ ಕಣ್ಣೆದುರೇ ಅವನ ಮಡದಿ ಮತ್ತು ಮಗುವನ್ನು ಮರಳಿ ಬಾರದ ಲೋಕಕ್ಕೆ ಎಳೆದೊಯ್ದವು.  ಈ ಘಟನೆ ನಡೆದು ಈಗ ಒಂದೂವರೆ ವರ್ಷಗಳಾಗಿವೆ. ಆ ಘಟನೆಯಿಂದ ಚೇತರಿಸಿಕೊಳ್ಳಲು ಇನ್ನೂ ರವಿಗೆ ಸಾಧ್ಯವಾಗುತ್ತಿಲ್ಲ. ಪ್ರತಿ ರಾತ್ರಿ ಕನಸಲ್ಲಿ ಅವನಿಗೆ ಸಾಗರದಲೆಯಲ್ಲಿ ಕೊಚ್ಚಿ ಹೋದ ತನ್ನ ಹೆಂಡತಿ ಮತ್ತು ಮಗುವಿನ ಭಯಭೀತ ಮುಖಗಳು ಕಾಡುತ್ತವೆ, ಅವರ ಆರ್ತನಾದ ಕೇಳುತ್ತದೆ, ಅವನು ಧುತ್ತೆಂದು ಎದ್ದು ಕುಳಿತುಬಿಡುತ್ತಾನೆ. ಹಗಲಿನಲ್ಲೂ ಕೂಡ ಅವನಿಗೆ ಆಗಾಗ ಮತ್ತೆ ಸಮುದ್ರ ದಡದಲ್ಲಿರುವಂತೆ, ಸುನಾಮಿ ಅಪ್ಪಳಿಸಿದಂತೆ ಎಲ್ಲೆಲ್ಲೂ ಕೋಲಾಹಲವೆದ್ದಂತೆ ಅನುಭವವಾಗುತ್ತದೆ, ಅವನು ಕುಳಿತಲ್ಲಿಯೇ ಬೆಚ್ಚಿ ಬೀಳುತ್ತಾನೆ. ಆ ಘಟನೆಯ ನಂತರ ಅವನು ಸಮುದ್ರವಿರಲಿ, ಸಣ್ಣ ಕೆರೆಯ ಹತ್ತಿರ ಹೋಗಲೂ ಹೆದರುತ್ತಾನೆ..... ಇದು PTSD  ಯ ಒಂದು ಸ್ಯಾಂಪಲ್. 

                                                                                    ******

PTSD  ಎನ್ನುವದು ಹೆಸರೇ ಹೇಳುವಂತೆ ದುರ್ಘಟನೆಯನ್ನು ಅನುಭವಿಸಿದವರಲ್ಲಿ ಅಥವಾ  ದುರ್ಘಟನೆಯ ಪ್ರತ್ಯಕ್ಷ ಸಾಕ್ಷಿಗಳಾದವರಲ್ಲಿ ಕಂಡು ಬರುವ ಒಂದು ಒತ್ತಡದ ಮಾನಸಿಕ ಸ್ಥಿತಿ.  ಜೀವನದಲ್ಲಿ ಘಟಿಸುವ ಯಾವುದೇ ದುರ್ಘಟನೆಯೂ ಮನಸಿಗೆ ಸ್ವಲ್ಪ ಮಟ್ಟಿಗೆ ಘಾಸಿ ಮಾಡುವದು ಸಹಜ, ಅದರಿಂದ ಸಾಮಾನ್ಯವಾಗಿ ಎಲ್ಲರೂ ಹೊರಬರುವದೂ ಸಹಜ . ಆದರೆ PTSD ಘಟಿಸುವದು ಅತ್ಯಂತ ಭೀಕರ ಅಥವಾ ಕರಾಳವಾದ ದುರ್ಘಟನೆಯ ಪರಿಣಾಮವಾಗಿ. ಪ್ರಕೃತಿ ವಿಕೋಪಗಳಾಗ ಭೂಕಂಪ, ಸುನಾಮಿ, ಮಹಾಪೂರ ಅಥವಾ ಮಾನವ ನಿರ್ಮಿತ ದುರ್ಘಟನೆಗಳಾದ ಭೀಕರ ರಸ್ತೆ ಅಪಘಾತ, ಭೀಕರ ಕಿರುಕುಳ (torture ), ಲೈಂಗಿಕ ಅತ್ಯಾಚಾರ (ರೇಪ್) ಮುಂತಾದವುಗಳು PTSD  ಗೆ ಎಡೆ ಮಾಡಿ ಕೊಡಬಲ್ಲವು. ವೈರಿ ಪಡೆಯಿಂದ ಕಿರುಕುಳ (torture ) ಗೆ ಒಳಗಾದ ಯುದ್ಧ ಕೈದಿಗಳಲ್ಲಿ PTSD ಅತಿ ಸಾಮಾನ್ಯವಾಗಿ ಕಂಡು ಬರುತ್ತದೆ. ಮೇಲೆ ವರ್ಣಿಸಿದಂತೆ ದುರ್ಘಟನೆಯ ಕಹಿ ನೆನಪುಗಳು ಪದೇ ಪದೇ ಕಾಡುವದು, ದುಸ್ವಪ್ನಗಳು ನಿದ್ರೆಯನ್ನು ಹಾಳು ಮಾಡುವದು, ಘಟನೆ ಮತ್ತೆ ಮತ್ತೆ ನಿಜವಾಗಿ ಘಟಿಸುತ್ತಿರುವಂತೆ ಅನುಭವವಾಗುವದು, ಘಟನೆಗೆ ಸಂಬಂಧ ಪಟ್ಟ ಸ್ಥಳ, ಸನ್ನಿವೇಶಗಳಿಂದ ಹೆದರಿ ದೂರ ಉಳಿಯುವದು, ಸತತ ಭಯ, ಹೆಚ್ಚಿದ ಎಡೆ ಬಡಿತ, ಮೈ ನಡುಕ, ಮುಂತಾದವು PTSD ಯ ಲಕ್ಷಣಗಳು. ವೈಜ್ಞಾನಿಕ ಮೂಲಗಳ ಪ್ರಕಾರ ಶೇಕಡಾ ೮ ರಷ್ಟು ಜನ ತಮ್ಮ ಜೀವಮಾನದಲ್ಲಿ PTSD ಗೆ ಒಳಗಾಗುತ್ತಾರೆ.ಆದರೇ ಈ ಅಂಕಿ ಅಂಶಗಳು ಪಾಶ್ಚಿಮಾತ್ಯ ದೇಶಗಳಿಂದ ಬಂದಿರುವದಾಗಿ ನಮ್ಮ ದೇಶದಲ್ಲಿ ಅಷ್ಟು ಕಂಡು ಬರುವದಿಲ್ಲವೆಂಬುದು ಲೇಖಕರ ಅಭಿಪ್ರಾಯ. ನಿಜವಾಗಿಯೂ ನಮ್ಮ ದೇಶದಲ್ಲಿ PTSD ಪ್ರಮಾಣ ಕಡಿಮೆಯೋ ಅಥವಾ ನಮ್ಮ ಜನಗಳಲ್ಲಿ ಅರಿವಿನ ಕೊರತೆಯಿಂದಾಗಿ ವೈದ್ಯರ ಗಮನಕ್ಕೆ ಬರುವದಿಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. 

PTSD ಗೆ ಚಿಕಿತ್ಸೆ ಇದೆ. ಮನೋವೈದ್ಯರಿಂದ ಸೂಕ್ತವಾದ ಔಷಧಿಗಳು, ತೀವ್ರತರವಾದ  ಆಪ್ತಸಮಾಲೋಚನೆ ಖಂಡಿತವಾಗಿಯೂ ಪರಿಣಾಮಕಾರಿ.  ಬಹು ಬೇಗನೆ ಇಂತಹ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ನೀಡಿದರೆ ವ್ಯಕ್ತಿಯು ಬಹು ಬೇಗನೆ ದುರ್ಘಟನೆಯ ಸರಪಣಿಯನ್ನು ಕಳಚಿಕೊಂಡು ಸಮಾಜದ ಮುಖ್ಯ ವಾಹಿನಿಯಲ್ಲಿ ಬೆರೆಯಲು ಸಹಾಯವಾಗುತ್ತದೆ. 

ಜೂನ್ ೨೭ ರಂದು ಅಮೇರಿಕಾದಲ್ಲಿ PTSD ಜಾಗ್ರತಿ ದಿನ ಅಂತ ಆಚರಿಸುತ್ತಾರೆ. ನಮ್ಮ ದೇಶದಲ್ಲಿ PTSD ಜಾಗೃತಿದೆ ವಿಶೇಷವಾದ ದಿನಒಂದನ್ನು ಗುರುತಿಸಿಲ್ಲ ಆದರೂ ನಮ್ಮ ಜನಗಳಲ್ಲಿ ಜಾಗೃತಿ ಮೂಡಿಸುವ ಚಿಕ್ಕ ಪ್ರಯತ್ನವಿದು. 

ಡಾ. ಭೀಮಸೇನ ಟಕ್ಕಳಕಿ 

ಮನೋರೋಗ ತಜ್ನ್ಯರು 

ಸುಮನ ಸೈಕಿಯಾಟ್ರಿ ಸೆಂಟರ್ ಬೆಳಗಾವಿ 

ಹಾಗೂ

ಕೆ. ಎಲ್. ಈ. ಆಸ್ಪತ್ರೆ ಬೆಳಗಾವಿ 

www.sumanapsychiatrycenter.com 

8867068333

Comments

Popular posts from this blog

Mental health and COVID-19: The questions that haunt

COVID and Mental health: Being Positive In Midst of “Positive”s

How Diabetes Impact our Psychological Health