"ಹೆಣ್ಮಕ್ಕಳಲ್ಲೇ ಮನೋರೋಗಗಳು ಹೆಚ್ಚಾ ಸಾರ್?"


 

ಈ ಪ್ರಶ್ನೆ ಕಿವಿಗೆ ಬಿದ್ದಾಗ ನನಗೆ ಕಿರಿಕಿರಿ ಆಗಿದ್ದು ಸಹಜ. ನನ್ನ ಜೊತೆಗಿದ್ದ ಹುಡುಗಿ, ನನ್ನ ಸಹಾಯಕ ವೈದ್ಯೆಯ ಸಿಟ್ಟು ಯಾರಿಗಾದರೂ ಗೋಚರವಾಗುವಂತಿತ್ತು. ಈ ಪ್ರಶ್ನೆ ಕೇಳಿದ್ದು ಒಬ್ಬ ಉಪದ್ಯಾಪಿ ಗಂಡಸು. ಅದೂ ಡಿಪ್ರೆಶನ್ ನಿಂದ ಬಳಲುತ್ತಿದ್ದ ತನ್ನ ಹೆಂಡತಿಯನ್ನು ಹೀಯಾಳಿಸುವ ಭರದಲ್ಲಿ. ನನ್ನ ಕಿರಿಕಿರಿಯನ್ನು ತೋರಗೊಡದೆ ಆದಷ್ಟು ಸಂಯಮದಿಂದ ನಾನು ಆ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡಿದೆ. ಎಲ್ಲಾ  ಮಾನಸಿಕ ರೋಗಗಳೂ ಹೆಣ್ಣುಮಕ್ಕಳಲ್ಲೇ ಹೆಚ್ಚಾಗಿ ಕಂಡು ಬರುತ್ತವೆ ಎಂಬುದು ಶುದ್ಧ ಸುಳ್ಳು, ಕೆಲವೊಂದು ರೋಗಗಳು ಪುರುಷರಲ್ಲೇ ಹೆಚ್ಚಾಗಿರುತ್ತವೆ ಎಂದೂ, ಹಾಗೂ ಹೆಣ್ಣುಮಕ್ಕಳಲ್ಲಿ ಕೆಲವೊಂದು ರೋಗಗಳು ಹೆಚ್ಚಾಗಿ ಕಂಡುಬಂದರೆ ಅದಕ್ಕೆ ಪ್ರಕೃತಿದತ್ತವಾಗಿ ಬಂದ ಕೆಲವೊಂದು ಜೈವಿಕ ತಾರತಮ್ಯಗಳು ಕಾರಣವಾದರೆ ಇನ್ನೂ ಕೆಲವೊಮ್ಮೆ ಸ್ತ್ರೀಯರು ಅನಾದಿ ಕಾಲದಿಂದಲೂ ಅನುಭವಿಸುತ್ತಿರುವ ಸಾಮಾಜಿಕ ಅಸಮಾನತೆ ಕೂಡ ಕಾರಣ ಎಂದು ಆ ವ್ಯಕ್ತಿಗೆ ಮನಗಾಣಿಸುವಷ್ಟರಲ್ಲಿ ನನಗೆ ಸಾಕು ಸಾಕಾಗಿ ಹೋಗಿತ್ತು. 
ಈ ಘಟನೆ  ನನಗೆ ಹಠಾತ್ತಾಗಿ ನೆನಪಾಗಿದ್ದಕ್ಕೆ ಕಾರಣ ಈ ವರ್ಷದ ವಿಶ್ವ ಮಾನಸಿಕ ಆರೋಗ್ಯ ದಿವಸದ ಧ್ಯೇಯ ವಾಕ್ಯ: "ಅಸಮಾನತೆಯ ಜಗತ್ತಿನಲ್ಲಿ ಮಾನಸಿಕ ಆರೋಗ್ಯ".... ಅಸಮಾನತೆ ಎಂಬ ಪಿಡುಗು ಮನುಕುಲದ ಇತಿಹಾಸದ ಪ್ರತಿ ಪುಟದಲ್ಲೂ ತನ್ನ ಕರಿ ನೆರಳನ್ನು ಚೆಲ್ಲಿದೆ. ಸಾಮಾಜಿಕ ಅಸಮಾನತೆ, ಧಾರ್ಮಿಕ ಅಸಮಾನತೆ, ಆರ್ಥಿಕ ಅಸಮಾನತೆ ಹೀಗೆ ಜಗತ್ತಿನಲ್ಲೆಲ್ಲ ತನ್ನ ವಿವಿಧ ರೂಪಗಳನ್ನು ಕಾಲ ಕಾಲಕ್ಕೆ ತೋರಿದೆ. ಮನುಷ್ಯನ ಸೂಕ್ಷ್ಮ ಮನಸಿನ ಮೇಲೆ ಅಸಮಾನತೆಯ ಪರಿಣಾಮ ಎಲ್ಲ ಕಾಲಕ್ಕೂ ಆಗಿದೆ. ಹೀಗಾಗಿ ಈ ಧ್ಯೇಯ ವಾಕ್ಯ ಅತಿ ಸಮಂಜಸವಾಗಿದೆ. 
ಇನ್ನು ತಲೆಬರಹದ ಪ್ರಶ್ನೆಗೆ ಉತ್ತರ ಕಾಣುವ  ಪ್ರಯತ್ನ ಮಾಡೋಣ. ಈಗಾಗಲೇ ಹೇಳಿದಂತೆ ಎಲ್ಲಾ ಮಾನಸಿಕ ರೋಗಗಳು ಮಹಿಳೆಯರಲ್ಲಿಯೇ ಹೆಚ್ಚು ಎನ್ನುವದು ಸತ್ಯಕ್ಕೆ ದೂರ. ಹೌದು ಕೆಲ ರೋಗಗಳಾದ ಖಿನ್ನತೆ, ಆತಂಕ, ಹಾಗೂ ಮನೋದೈಹಿಕ ರೋಗಗಳು (psychosomatic illness )  ಪುರುಷರಿಗಿಂತ ಸ್ತ್ರೀಯರಲ್ಲಿ ಹೆಚ್ಚಾದರೆ, ಋತುಸ್ರಾವದ ಸಮಯದಲ್ಲಿ ಮಹಿಳೆಯರಲ್ಲಿ ಭಾವನಾತ್ಮಕ ತುಮುಲ ಹಾಗೂ ಖಿನ್ನತೆಯಂತಹ ಲಕ್ಷಣಗಳನ್ನು ತರುವ  perimenstrual dysphoric  disorder, ಗರ್ಭಿಣಿಯರಲ್ಲಿ ಹಾಗೂ ಬಾಣತಿಯರಲ್ಲಿ ಕಾಡುವ ವಿವಿಧ ಮಾನಸಿಕ ರೋಗಗಳು   ಸ್ವಾಭಾವಿಕವಾಗಿ ಮಹಿಳೆಯರಲ್ಲಷ್ಟೇ ಕಂಡು ಬರುತ್ತದೆ . ಮೇಲೆ ಹೇಳಿದಂತೆ ಈ ತಾರತಮ್ಯಕ್ಕೆ ಅರ್ಧ ಕಾರಣ ಪ್ರಕೃತಿಯಾದರೆ ಇನ್ನರ್ಧ ಕಾರಣಗಳು ಮಾನವ ನಿರ್ಮಿತ. ಸ್ತ್ರೀಯರಲ್ಲಿ ನೈಸರ್ಗಿಕವಾಗಿ ಕಾಣಸಿಗುವೆ ಕೆಲವೊಂದು ನರವ್ಯೂಹದ ಕಾರ್ಯವಿಧಾನಾದ ಬದಲಾವಣೆಗಳೂ, ರಾಸಾಯನಿಕ ಬದಲಾವಣೆಗಳೂ ಒಂದೆಡೆಯಾದರೆ,   ಸ್ತ್ರೀ ಶೋಷಣೆ, ಸ್ತ್ರೀಯರು ಎದುರಿಸುವ ಸಾಮಾಜಿಕ, ಹಾಗೂ ಆರ್ಥಿಕ ಅಸಮಾನತೆ ಇನ್ನೊಂದೆಡೆ. ಮೇಲೆ ಹೇಳಿದ ದೃಷ್ಟಾಂತದಲ್ಲಿ ಗಂಡನಿಂದ ಶೋಷಣೆಗೆ ಒಳಗಾಗಿದ್ದೆ ಆ ಮಹಿಳೆಯ ಡಿಪ್ರೆಶನ್ ಗೆ ಕಾರಣವಾಗಿದ್ದು ಗಮನಾರ್ಹ. 
ಸ್ತ್ರೀಕುಲವಷ್ಟೇ ಅಲ್ಲದೆ,ಜಗತ್ತಿನಾದ್ಯಂತ ವಿವಿಧ  ರೀತಿಯ ಅಸಮಾನತೆಗೆ ನಿರಂತರವಾಗಿ ಬಲಿಯಾಗುತ್ತಿರುವ ಬಡವರು, ಹಿಂದುಳಿದ ವರ್ಗದವರು, ಧಾರ್ಮಿಕ ಅಲ್ಪಸಂಖ್ಯಾತರು, ತ್ರಿತೀಯ ಲಿಂಗಿಗಳು ಪ್ರತಿ ದಿನ ವಿವಿಧ ಮಾನಸಿಕ ತೊಂದರೆಗಳಿಂದ ಬಳಲುತ್ತಿದ್ದಾರೆ. ಪ್ರತೀ ಜೀವಿಗೂ, ಪ್ರತೀ ವ್ಯಕ್ತಿಗೂ ಸರಿಸಮಾನವಾದ ಜೀವನ ಹಕ್ಕನ್ನು ಸೃಷ್ಟಿಕರ್ತನು ನೀಡಿರುವಾಗ " ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ" ಎಂಬಂತೆ ನಾವು ಅದನ್ನು ಕಿತ್ತಿಕೊಳ್ಳುವದು ಬೇಡ. ಯಾರ ಆತ್ಮಗೌರವಕ್ಕೂ ಧಕ್ಕೆ ಆಗದಂತೆ ನಡೆದುಕೊಳ್ಳುವದು ಸಲ್ಲ. ಬನ್ನಿ ಅಸಮಾನತೆಯ ಕಾರ್ಮೋಡವನ್ನ ಜನಮಾನಸದ ದಿಗಂತದಿಂದ ಅಳಿಸೋಣ, ಸಮಾನತೆಯ ಹೊಂಗಿರಣ ಪಸರಿಸೋಣ. 
ಡಾ. ಭೀಮಸೇನ ಟಕ್ಕಳಕಿ 
ಮನೋರೋಗ ತಜ್ಞರು 
ಸುಮನ ಸೈಕ್ಯಾಟ್ರಿ ಸೆಂಟರ್ 
ಬೆಳಗಾವಿ 



Comments

  1. Nice and informative article..

    ReplyDelete
  2. ಮಾನಸಿಕ ಆರೋಗ್ಯ ದೇಹದ ಆರೋಗ್ಯಕ್ಕಿಂತ ದೊಡ್ಡ ದು! Good writeup need of the day!

    ReplyDelete
  3. Very informative and good read sir

    ReplyDelete

Post a Comment

Popular posts from this blog

Mental health and COVID-19: The questions that haunt

COVID and Mental health: Being Positive In Midst of “Positive”s

How Diabetes Impact our Psychological Health